ಶೈವಸಂಪ್ರದಾಯಕ್ಕೆ ಸೇರಿದ ಒಂದು ಜನಪದ ಧಾರ್ಮಿಕ ವೀರನೃತ್ಯ. ಮೈಸೂರು, ಮಂಡ್ಯ, ಬೆಂಗಳೂರು ಜಿಲ್ಲೆಗಳಲ್ಲಿ ಜನಪ್ರಿಯವಾಗಿದೆ. ಲಿಂಗಬೀರ, ಲಿಂಗಧೀರ, ಲಿಂಗವೀರ ಎಂದು ಕರೆಯಲ್ಪಡುವ ವೀರಶೈವ ಸಂಪ್ರದಾಯಕ್ಕೆ ಸೇರಿದವರು ವಂಶಪಾರಂಪರ್ಯವಾಗಿ ಈ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಲಿಂಗದ ಬೀರ ನೃತ್ಯದಲ್ಲಿ ಸಾಮಾನ್ಯವಾಗಿ ಒಬ್ಬ ನೃತ್ಯಗಾರನಿರುತ್ತಾನೆ.  ವಿರಳವಾಗಿ ಇಬ್ಬರು ಸೇರುವುದೂ ಉಂಟು. ಲಿಂಗದ ಬೀರರ ವೇಷ ಭೂಷಣಗಳು ಆಕರ್ಷಕವಾಗಿರುತ್ತವೆ. ತಲೆಗೆ ಮಿರಗ ಚೌಲಿ, ಹಣೆಯ ಮೇಲೆ ಕಿರೀಟದಾಕಾರ ಹೋಲುವ ಹಿತ್ತಾಳೆಯ ಲಿಂಗಸರ, ಸೊಂಟಕ್ಕೆ ಹಿತ್ತಾಳೆಯ ದಕ್ಷಬ್ರಹ್ಮನ ತಲೆಗಳು, ಬೆನ್ನಿಗೆ ಹಿತ್ತಾಳೆಯ ವೀರಭದ್ರನ ಹಲಗೆ, ಎಡಗೈಯಲ್ಲಿ ತೋಪಡ, ಬಲಗೈಯಲ್ಲಿ ಕತ್ತಿ ಇರುತ್ತವೆ.  ಎರಡು ಕಾಲಿಗೂ ಗೆಜ್ಜೆಗಳನ್ನು ಧರಿಸಿ, ಬಲಗಾಲಿಗೆ ಜಂಗು ಕಟ್ಟಿಕೊಳ್ಳು ತ್ತಾರೆ. ಕಾವಿಯ ನಿಲುವಂಗಿ (ಕೆಲವೊಮ್ಮೆ ಬಣ್ಣದ ಶರಾಯಿ) ಮತ್ತು ದಟ್ಟಿಯನ್ನು ಧರಿಸಿ ಮುಖವನ್ನು ವಿಭೂತಿ, ಗಂಧ, ಕುಂಕುಮಗಳಿಂದ ಅಲಂಕರಿಸಿಕೊಳ್ಳುತ್ತಾರೆ. ಕೊರಳಲ್ಲಿ ರುದ್ರಾಕ್ಷಿ ಸರವಿರುತ್ತದೆ. ನೃತ್ಯದಲ್ಲಿ ಓಲಗ, ತಮ್ಮಟೆ, ಕೆಲವು ಕಡೆಗಳಲ್ಲಿ ತಮ್ಮಟೆಯ ಬದಲು ಕರಡೆವಾದ್ಯವನ್ನು ಬಳಸುತ್ತಾರೆ. ಲಿಂಗದ ಬೀರರು ವೀರಭದ್ರನ ಖಡ್ಗಗಳನ್ನು (ಹಾಡುಗಳನ್ನು) ಹೇಳುತ್ತ, ಕೈಗಳಲ್ಲಿರುವ ತೋಪಡ ಮತ್ತು ಕತ್ತಿಗಳನ್ನು ಝಳಪಿಸುತ್ತ, ವೀರಾವೇಶದಿಂದ ವಾದ್ಯಗಳ ಗತ್ತಿಗೆ ತಕ್ಕಂತೆ ಲಯಬದ್ಧವಾಗಿ ವೃತ್ತಾಕಾರದಲ್ಲಿ ನರ್ತಿಸುತ್ತಾರೆ.  ಆ ಸಮಯದಲ್ಲಿ ವಿಶಿಷ್ಟ ವೇಷವೇನೂ ಇಲ್ಲದ ಸಾಮಾನ್ಯ ವ್ಯಕ್ತಿಯೊಬ್ಬ ಭಲರೇ ವೀರ, ಹರೋಹರಾ ಎಂದು ಕಾಕು ಹೇಳುತ್ತ, ಜಾಗಟೆ ಬಡಿ ಯುತ್ತ ಸಾವಧಾನವಾಗಿ ವೃತ್ತಾಕಾರದಲ್ಲಿ ನಡೆಯುತ್ತಾನೆ.

ಮದುವೆ, ಗೃಹಪ್ರವೇಶ ಮುಂತಾದ ಶುಭಸಂದರ್ಭಗಳಲ್ಲಿ ಈ ನೃತ್ಯದ ಏರ್ಪಾಡಿರುತ್ತದೆ. ಅರಸು ಮನೆತನದವರು, ವೀರಶೈವರು, ಕೆಲವು ಕಡೆಗಳಲ್ಲಿ ಒಕ್ಕಲಿಗರು, ಕುರುಬರು, ಮಡಿವಾಳರೂ ಲಿಂಗದ ಬೀರರನ್ನು ಬರಮಾಡಿಕೊಳ್ಳುತ್ತಾರೆ.  ಗೊತ್ತಾದ ದಿನ ಅವರು ಕಾರ್ಯದ ಮನೆಗೆ ಬಂದು ಅಲ್ಲಿ ವೇಷಭೂಷಣಗಳನ್ನು ಮತ್ತು ಲಾಂಛನಗಳನ್ನು ಧರಿಸಿ ಮನೆಯಿಂದ ನಡೆಮಡಿಯ ಮೇಲೆ ಗೊತ್ತುಪಡಿಸಿರುವ ಸ್ಥಳಕ್ಕೆ (ಸಾಮಾನ್ಯವಾಗಿ ದೇವಸ್ಥಾನ) ಹೋಗುತ್ತಾರೆ. ಅಲ್ಲಿಂದ ಮನೆಗೆ ಬರುವಾಗ ನೃತ್ಯ ಮಾಡುತ್ತಾರೆ. ನೃತ್ಯ ಮುಗಿಯುವ ತನಕ ಅವರು ಉಪವಾಸ ಇರುತ್ತಾರೆ. ಅನಂತರ ಪಡಿ ಮತ್ತು ಕಾಣಿಕೆ ಹಾಗೂ ಪಂಚೆ, ವಸ್ತ್ರಗಳನ್ನು ಪಡೆಯುತ್ತಾರೆ. ಮನೆ ಪ್ರವೇಶ ಮಾಡುವ ಮುಂಚೆ ತೆಂಗಿನಕಾಯಿಯನ್ನು ಅವರ ಮುಖದಿಂದ ಇಳಿ ತೆಗೆದು ಒಡೆಯುವ ರೂಢಿಯುಂಟು.

ಲಿಂಗದ ಬೀರರು ಹೇಳುವ ಖಡ್ಗಗಳಲ್ಲಿ ಒಂದು ಹೀಗಿದೆ: ಮೆಟ್ಟಿದಾ ವಿಗೆ | ತೊಟ್ಟುರುಳಿ ಪದಕ | ವುಟ್ಟ ಚಲ್ಲಣಕಾಸೆ | ವುಡಿಯ ಬಾಕು| ರಮಿಯ ಚೂರಿ | ಕಕ್ಕಡವಂತಿ | ಅಂಬು | ಗಂಡುಗತ್ತರಿ | ಪಾಂಡಿವಾಳ| ರತ್ನದ ಕಿರೀಟ | ಕೈಯಲ್ಲಿ ಕಠಾರಿ | ಇಷ್ಟು | ಆಯುಧಗಳನ್ನೇ ಪಿಡಿದು | ಎತ್ತಲಿಂದ ಬಂದೋ | ಸುತ್ತ ದೇವತೆಯ ಗಂಡ | ಕಲಿವೀರಭದ್ರ | ನಮಗ ರುದ್ರಾ | ಕದನಕ್ಕೆ ಕುಠಾರ | ಮದನ ಸಂಹಾರ | ರಣದೊಳಗೆ ಭಯಂಕರ | ಕರುಣಿಸೊ | ಕರುಣ ಕೃಪಾಲ | ಕರೆಕಾಳಿಂಗರುದ್ರಾ |
	
(ಟಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ